ಕೀರ್ತಿನಾಥ ಕುರ್ತುಕೋಟಿ: -

1928-2003. ಕನ್ನಡದ ಅಗ್ರಗಣ್ಯ ವಿಮರ್ಶಕರು ಹಾಗೂ ವಿದ್ವಾಂಸರು. 1928 ಅಕ್ಟೋಬರ್ 13ರಂದು ಗದಗ ಸಮೀಪದ ಕುರ್ತಕೋಟಿಯ ವಿದ್ವತ್‍ಪರಂಪರೆಯ ಗೌಡರ ಮನೆತನದಲ್ಲಿ ಜನಿಸಿದರು. ತಂದೆ ಡಿ.ಕೆ.ಕುರ್ತಕೋಟಿ, ತಾಯಿ ಪದ್ಮಾವತಿಬಾಯಿ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಗದಗಿನಲ್ಲಿ ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು (1958). ಗದಗಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ, ಬೆಳಗಾಂವಿ ಕಾಲೇಜಿನಲ್ಲಿ ಟ್ಯೂಟರ್ ಆಗಿ, ಪುಣೆಯ ಸರ್.ಪರಶುರಾಮಭಾವು ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು (1958-67). ಅನಂತರ ಗುಜರಾತಿನ ಸರ್ದಾರ್ ಪಟೇಲ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ (1967), ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಶೈಕ್ಷಣಿಕ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಧಾರವಾಡದಲ್ಲಿ ನೆಲೆಸಿದರು.

 ಧಾರವಾಡದ ಸಾಹಿತ್ಯಕ ಹಾಗೂ ಸಾಂಸ್ಕøತಿಕ ಪರಿಸರ ಇವರ ಮೇಲೆ ಗಾಢವಾದ ಪ್ರಭಾವ ಬೀರಿತು. ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ರಂ.ಶ್ರೀ.ಮುಗಳಿ, ವಿ.ಕೃ.ಗೋಕಾಕ ಮೊದಲಾದವರ ಸಂಪರ್ಕ ಹಾಗೂ ಸಹವಾಸಗಳು ಇವರಿಗೆ ದೊರೆತವು. ಇವರು ಕನ್ನಡ, ಇಂಗ್ಲಿಷ್, ಮರಾಠಿ, ಸಂಸ್ಕøತ, ಗುಜರಾತಿ, ಹಿಂದಿ ಮೊದಲಾದ ಭಾರತೀಯ ಭಾಷಾ ಸಾಹಿತ್ಯದ ಆಳವಾದ ಅಧ್ಯಯನ ಹಾಗೂ ಅಪೂರ್ವವಾದ ತಮ್ಮ ಪಾಂಡಿತ್ಯ ಪ್ರತಿಭೆಗಳಿಂದ ಕನ್ನಡ ವಿಮರ್ಶೆಗೆ ಹೊಸ ಆಯಾಮ ನೀಡಿದರು. 'ಮನೋಹರ ಗ್ರಂಥಮಾಲೆ'ಯ ನಡೆದು ಬಂದ ದಾರಿಯ ಸಂಪುಟಗಳಿಗೆ ಬರೆದ 'ಯುಗ ಧರ್ಮ ಹಾಗೂ ಸಾಹಿತ್ಯ ದರ್ಶನ' (1962) ಹೊಸಗನ್ನಡ ವಿಮರ್ಶೆಯಲ್ಲಿ ಗಮನಾರ್ಹ ವಾದುದು. ಆಧುನಿಕ ಕನ್ನಡ ಸಾಹಿತ್ಯವನ್ನು ವಿಮರ್ಶೆಯ ನಿಕಷಕ್ಕೆ ಹಚ್ಚಿ ನೋಡುವ ಕುರ್ತಕೋಟಿಯವರ ಸಾಹಸ ಅದ್ವಿತೀಯವಾದದ್ದು. ಇವರು ಆಧುನಿಕ ಕನ್ನಡ ವಿರ್ಮರ್ಶೆಗೆ ಹೊಸಭಾಷೆ, ದೃಷ್ಟಿ ಧೋರಣೆಗಳನ್ನು ರೂಪಿಸಿದರು. ಮನೋಹರ ಗ್ರಂಥಮಾಲೆಯ ಸಾಹಿತ್ಯ ಸಲಹೆಗಾರರಾಗಿಯೂ ಇವರು ಅನೇಕ ಲೇಖಕರ ಪ್ರತಿಭೆಯನ್ನು ಗುರುತಿಸಿ ಅವರ ಕೃತಿಗಳು ಪ್ರಕಟವಾಗುವಂತೆ ನೋಡಿಕೊಂಡರು; ಅನೇಕ ಕೃತಿಗಳನ್ನು ವಿಮರ್ಶಿಸಿದರು. ಮನ್ವಂತರ ಎಂಬ ಸಾಹಿತ್ಯ ವಿಮರ್ಶಾ ಪತ್ರಿಕೆಯ ಸಂಪಾದಕರಾಗಿ ಸಾಹಿತ್ಯ ಚರ್ಚೆಗೆ ವೈಚಾರಿಕ ಆಯಾಮವನ್ನು ಒದಗಿಸಿದರು. ನವ್ಯಕಾವ್ಯ ಪ್ರಯೋಗ (1963), ಭೃಂಗದ ಬೆನ್ನೇರಿ, ವಿಮರ್ಶೆಯ ವಿನಯ: ನಾಟಕ (1985), ವಿಮರ್ಶೆಯ ವಿನಯ: ಕಾದಂಬರಿ (1982), ಸಂಸ್ಕøತಿ ಸ್ಪಂದನ, ಪುಟಬಂಗಾರಕ್ಕೆ ಬರೆದ ಪ್ರಸ್ತಾವನೆ, ಶ್ರಾವಣ ಪ್ರತಿಭೆ, ಕುಮಾರವ್ಯಾಸ, ಉರಿಯನಾಲಗೆ (1993), ದ.ರಾ.ಬೇಂದ್ರೆ, ಬಾರೋ ಸಾಧನಕೇರಿಗೆ, ಬಯಲು ಆಲಯ (1992), ಅಸಂಗತನಾಟಕಗಳು, ಕನ್ನಡ ಸಾಹಿತ್ಯ ಸಂಗಾತಿ (1995), ನೂರುಮರ ನೂರು ಸ್ವರ (1998) ಪ್ರತ್ಯಭಿಜ್ಞಾನ (1999) - ಹೀಗೆ ವಿಮರ್ಶೆಯ ವಿವಿಧ ಸಂಪುಟಗಳಲ್ಲಿ ಇವರ ವಿಮರ್ಶನ ಪಾಂಡಿತ್ಯಪ್ರವಾಹ ಹರಿದಿದೆ.

 ಇವರು ಅಂಕಣ ಸಾಹಿತ್ಯದಲ್ಲೂ ವೈಚಾರಿಕ ಪ್ರತಿಭೆಯನ್ನು ಪ್ರಕಟಪಡಿಸಿದ್ದಾರೆ. ಪ್ರಜಾವಾಣಿಯ 'ಸಮ್ಮುಖ' ಅಂಕಣ ಲೇಖನಗಳು ವಿಶಿಷ್ಟವಾಗಿವೆ. ಭಾರತೀಯ ಸಾಹಿತ್ಯ ಸಂಸ್ಕøತಿಗೆ ಸಂಬಂಧಿಸಿದ ಇವರ ವಿಚಾರಧಾರೆ, ವ್ಯಾಖ್ಯಾನ ಪರಿಣತಿ ವಿಶೇಷವಾದದ್ದು. ಇವರು ಕುಮಾರವ್ಯಾಸ ಮತ್ತು ಬೇಂದ್ರೆ ಸಾಹಿತ್ಯದ ತಜ್ಞರೆಂದೂ ಖ್ಯಾತರಾಗಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯ ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದಂತೆ ಮೂರು ನೂರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಶ್ರೇಷ್ಠ ಅನುವಾದಕರೂ ಆಗಿರುವ ಇವರು ಶಂ.ಬಾ.ಜೋಶಿ ಅವರ ಮರಾಠೀ ಸಂಸ್ಕøತಿ: ಕೆಲವು ಸಮಸ್ಯೆಗಳು ಎಂಬ ಕೃತಿಯನ್ನು ಅನುವಾದಿಸಿದ್ದಾರೆ. ಇದರ ಅನುವಾದಕ್ಕಾಗಿ ಕೇಂದ್ರಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ (1993) ಮತ್ತು ಉರಿಯನಾಲಗೆ ಅಂಕಣ ಲೇಖನ ಸಂಪುಟಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ (1995) ದೊರಕಿವೆ. ಆಮನಿ (1956), ಚಂದ್ರಗುಪ್ತ (1983) ಇವು ಇವರ ಸೃಜನಶೀಲ ಬರೆಹದ ಮಾದರಿಗಳು.

 ಇವರು ಅಪರೂಪದ ವಾಗ್ಮಿಗಳೂ ಹೌದು. ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಸಮಾನವಾದ ಶ್ರದ್ಧೆಯುಳ್ಳವರೂ ಆಗಿದ್ದ ಇವರು ಸಮಕಾಲೀನ ಭಾರತೀಯ ವಿದ್ವಾಂಸ ವಿಮರ್ಶಕರಲ್ಲಿ ಪ್ರಮುಖರಾಗಿದ್ದರು. ನಿರಂತರವಾದ ಓದು, ಸಾಹಿತ್ಯಸಂವಾದ ನಡೆಸುವ ಮನೋಹರ ಗ್ರಂಥಮಾಲೆಯ ಅಟ್ಟದ ಗೆಳೆಯರ ಬಳಗದ ರಸಿಕ ಹರಟೆಗಾರರಾಗಿಯೂ ಹೆಸರಾಗಿದ್ದರು. 'ಕನ್ನಡದ ಕೀರ್ತಿ' (1989) ಅಭಿಮಾನಿಗಳು ಇವರಿಗೆ ಅರ್ಪಿಸಿದ ಅಭಿನಂದನಗ್ರಂಥ. ಇವರು 2003 ಆಗಸ್ಟ್ 31ರಂದು ಧಾರವಾಡದಲ್ಲಿ ನಿಧನಹೊಂದಿದರು.           (ಜಿ.ಎಂ.ಎಚ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ